- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
೧೦.೦೪.೨೦೨೫ ರಿಂದ ೦೪.೦೫.೨೦೨೫ ರವರೆಗೆ ಧಾರವಾಡದ ಸಾಯಿಮಂದಿರ ಬಳಿ ನಡೆದ ಅರಳು ಚಿಣ್ಣರ ಬೇಸಿಗೆ ರಂಗ ಶಿಬಿರದ ಸಮಾರೋಪ ಸಮಾರಂಭದ ವರದಿ.
ಮಕ್ಕಳ ಶಿಕ್ಷಣ ಹಾಗೂ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳು ಮತ್ತು ಇತರೆ ಹವ್ಯಾಸಗಳನ್ನು ಬೆಳೆಸುವ ನಿಟ್ಟಿನಲ್ಲಿ ಮಕ್ಕಳ ಶಿಬಿರಗಳ ಆಯೋಜನೆಯ ಅಗತ್ಯವಿದೆ. ಇದರಿಂದ ಶಿಬಿರದಲ್ಲಿ ಕಲಿಸುವ ಮತ್ತು ಕಲಿಯುವ ಪ್ರತಿಯೊಬ್ಬರ ವ್ಯಕ್ತಿತ್ವದ ಬೆಳವಣಿಗೆಯಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಬೆಕ್ಕೇರಿ ಹೇಳಿದ್ದಾರೆ. ನಾವೀಕಾ ರಂಗಭೂಮಿ ಸಂಸ್ಥೆ, ರಂಗ ಪಯಣ ಹಾಗೂ ರಂಗ ಪರಿಸರ ಸಂಸ್ಥೆಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ದಿನಾಂಕ ೦೪.೦೫.೨೦೨೫ ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆಯಲ್ಲಿ ಏರ್ಪಡಿಸಲಾದ ಅರಳು ಚಿಣ್ಣರ ಬೇಸಿಗೆ ರಂಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇಂದಿನ ಮಕ್ಕಳು ತಮ್ಮ ಹೆಚ್ಚಿನ ಸಮಯವನ್ನು ಟಿ.ವಿ, ಮೊಬೈಲ್ ವೀಕ್ಷಿಸುವುದರಲ್ಲೇ ಕಳೆಯುತ್ತಾರೆ. ಅದರ ಬದಲಾಗಿ ಮಕ್ಕಳಿಗೆ ರಜಾ ದಿನಗಳಲ್ಲಿ ಆಯೋಜಿಸಲಾಗುವ ಶಿಬಿರಗಳಲ್ಲಿ ಸಂಗೀತ, ನೃತ್ಯ, ನಾಟಕ, ಚಿತ್ರಕಲೆಗಳಂತಹ ಹಲವಾರು ವಿವಿಧ ಬಗೆಯ ಕಲಾ ಪ್ರಕಾರಗಳಲ್ಲಿ ಅವರು ತೊಡಗಿಸಿಕೊಳ್ಳುವುದರಿಂದ ವರ್ಷಪೂರ್ತಿ ಕ್ರೀಯಾಶೀಲರಾಗಿ, ಅತ್ಯಂತ ಚಟುವಟಿಕೆಯಿಂದ ಕೂಡಿ, ಶಿಕ್ಷಣದಲ್ಲೂ ಪ್ರಗತಿಯನ್ನು ಸಾಧಿಸುತ್ತಾರೆ. ಇಂಥ ಕಾರ್ಯಕ್ರಮಗಳ ಆಯೋಜನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರ ನಿರಂತರವಾಗಿ ಇದೆ. ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ಚಟುವಟಿಕೆಯಿಂದ ಕೂಡಿರುವ ನಾವೀಕಾ ರಂಗಭೂಮಿ ಸಂಸ್ಥೆ, ರಂಗ ಪಯಣ ಹಾಗೂ ರಂಗ ಪರಿಸರ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ, ನಾವೀಕಾ ರಂಗಭೂಮಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪದ್ಮಾವತಿ ದೇವಶಿಖಾಮಣಿ, ಮಕ್ಕಳ ಆಸಕ್ತಿಗೆ ಅನುಗುಣವಾಗಿ ಪಾಲಕರು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು. ಪರದೆಯ ಮೇಲೆ ನೋಡಿ ಆನಂದಿಸುವುದಕ್ಕಿಂತ, ವೇದಿಕೆಯ ಮೇಲೆ ನೇರವಾಗಿ ಪ್ರದರ್ಶನಗೊಳ್ಳುವ ಕಾರ್ಯಕ್ರಮಗಳನ್ನು ವೀಕ್ಷಿಸುವ ಹವ್ಯಾಸವನ್ನು ಪೋಷಕರು ಮಕ್ಕಳಲ್ಲಿ ಬೆಳೆಸಬೇಕು. ಆರ್ಥಿಕ ಬಲವರ್ಧನೆಗೆ ಉದ್ಯೋಗವಾದರೆ, ಮಾನಸಿಕ ಬಲವರ್ಧನೆಗೆ ಸಂಗೀತ, ನೃತ್ಯ, ನಾಟಕ, ಯಕ್ಷಗಾನದಂತಹ ಕಲೆ ಹಾಗೂ ದೈಹಿಕ ಸಧೃಢತೆಗೆ ಕ್ರೀಡೆಗಳನ್ನು ಮಕ್ಕಳು ಹವ್ಯಾಸವಾಗಿ ರೂಢಿಸಿಕೊಳ್ಳಬೇಕು ಎಂದು ಹೇಳಿದರು.ನಾವೀಕಾ ರಂಗಭೂಮಿ ಸಂಸ್ಥೆ ಅಧ್ಯಕ್ಷೆ ಆರತಿ ದೇವಶಿಖಾಮಣಿ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾರ್ಥಿಗಳಿಂದ ಪಾರ್ಥನಾ ಗೀತೆ, ನಂತರ ಯಕ್ಷಗಾನ, ಪೌರಾಣಿಕ ನಾಟಕಗಳ ರಂಗ ರೂಪಕಗಳು, ಜಾನಪದ ಹಾಡು, ಸಂಗೋಳ್ಳಿ ರಾಯಣ್ಣ ಏಕ ಪಾತ್ರಾಭಿನಯ, ಯಲ್ಲಮ್ಮದೇವಿಯ ನೃತ್ಯ, ಯೋಗಾಸನ ಹಾಗೂ ಮಕ್ಕಳಿಂದ ಬಿಡಿಸಲಾದ ಚಿತ್ರಗಳನ್ನು ಪ್ರದರ್ಶಿಸಲಾಯಿತು. ರಂಗ ಪಯಣದ ಅಧ್ಯಕ್ಷೆ ಎನ್.ರಾಜೇಶ್ವರಿ ಸುಳ್ಯ ಹಾಗೂ ರಂಗ ಪರಿಸರದ ಕಾರ್ಯದರ್ಶಿ ಚಂದ್ರಶೇಖರ ಜಿಗಜಿನ್ನಿ, ಅತಿಥಿಗಳಾಗಿ ರಂಗಭೂಮಿ ಹಿರಿಯ ಕಲಾವಿದ ಸುಭಾಷ ಖ್ಯಾತಣ್ಣವರ, ಕುಂಟೆ, ಸವಿತಾ, ಸಂಪನ್ಮೂಲ ವ್ಯಕ್ತಿಗಳಾದ ಸ್ವರೂಪ.ಜಿ.ಹಬ್ಬು, ಗದಿಗೆಪ್ಪ ಭಾವಿ, ಶೈಲಜಾ ಬಿದರಿ, ಮಂಗಲಾ ಪಡನಾಡ, ಸುಹಾನಿ ವಿಂಗೋಲೆ ಸೇರಿದಂತೆ ಅನೇಕ ರಂಗಾಸಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ