ಕಾದಂಬರಿ- ಸಂಚಿಕೆ -35


ಹಿಂದಿನ ಸಂಚಿಕೆಯಲ್ಲಿ

ಮೂವರು  ಆರೋಪಿಗಳ ಮನೆಗಳಿಗೆ ಭೇಟಿ ನೀಡಿ ಅವರ ಮನೆಗಳನ್ನು ಸರ್ಚ್ ಮಾಡಿ ಏನೂ ಸಿಗದಿದ್ದರಿಂದ ಅಲ್ಲೇ ಇದ್ದ ಸಿಬ್ಬಂದಿಗೆ  ಮೂವರು ಆರೋಪಿಗಳ ಮನೆಯ ಬಳಿ ಹೋಗಿ ಅವರುಗಳ ಮನೆಗೆ ಯಾರ್ಯಾರು ಬರುತ್ತಾರೆಂದು ವರದಿ ಮಾಡಿರೆಂದು ಹೇಳಿ ಕಳುಹಿಸಿ ಎಸ್ ಐ ಸ್ಟೇಷನ್ ಗೆ ವಾಪಸ್ಸಾಗುತ್ತಾರೆ 

ಕಥೆಯನ್ನು ಮುಂದುವರೆಸುತ್ತಾ...

ಎಸ್ ಐರವರು ನಾಲ್ಕನೇ ಆರೋಪಿಯನ್ನು ಹುಡುಕಿ ಹಣವಿರುವ ಸೂಟ್‌ಕೇಸನ್ನು ಅವನಿಂದ ವಸೂಲ್‌ ಮಾಡಿ ಕೋರ್ಟಿಗೆ ಹಾಜರುಪಡಿಸಲು ಪ್ರಯತ್ನಿಸುತ್ತೇನೆ. ಆದರೆ ನಿಮಗೆ ಸೂಟ್‌ಕೇಸ್ ಹಣಕ್ಕಾಗಿ ತೊಂದರೆಕೊಡುವುದಿಲ್ಲವೆಂದು ಹೇಳಿದ್ದರಿಂದ ಭಾಸ್ಕರ ಹಾಗೂ ಅವನ ಅಪ್ಪ ಅಮ್ಮನಿಗೆ ಸ್ವಲ್ಪ ಸಮಾಧಾನವಾಗಿರುತ್ತದೆ. ಭಾಸ್ಕರನಿಗೆ ಅಪ್ಪನ ವಿಚಾರವಾಗಿ ಹಲವಾರು ಸ್ಥಳಗಳಿಗೆ ಹೋಗಿ ಅಲ್ಲಿ ಹಸಿವಾದಾಗ ತಿಂಡಿ ತಿಂದು ಕಾಫಿ ನೀರು ಕುಡಿದಿದ್ದರಿಂದ ಧ್ವನಿ ಸ್ವಲ್ಪ ವ್ಯತ್ಯಾಸವಾಗಿರುತ್ತದೆ.‌ ಆದರೇನು ಮಾಡುವುದು ತನ್ನ ತಂದೆ ಸಂಪೂರ್ಣ ಬಿಡುಗಡೆಯಾಗುವವರೆಗೂ ವಿಶ್ರಾಂತಿ ಎನ್ನುವುದು ಕನಸಾಗಿದೆ. ತನ್ನ ತಂದೆಯನ್ನು ಪುನಃ  ಯಾವಾಗ ಅರೆಸ್ಟ್ ಮಾಡಿಬಿಡುತ್ತಾರೋ ಎಂಬ ಭಯದಿಂದ ರಾತ್ರಿಯ ವೇಳೆ ನಿದ್ದೆಯೂ ಸರಿಯಾಗಿ ನಿದ್ರಿಸಲು ಆಗುತ್ತಿಲ್ಲ. ನನ್ನ ಅದೃಷ್ಟವೋ ಅಥವಾ ನಮ್ಮಪ್ಪನ ಅದೃಷ್ಟವೋ ಏನೋ  ಪ್ರದ್ಯುಮ್ನ ಸಿಕ್ಕಿದ್ದಕ್ಕೆ ನನಗೆ  ಬಾಹುಬಲ ಬಂದಂತಾಗಿದೆ, ಅಕಸ್ಮಾತ್ ಅವನು ಸಿಗದೇ ಇದ್ದಿದ್ದರೆ ಆ ಎಸ್ ಐ ನಮ್ಮನ್ನು ಬುಗುರಿಯಂತೆ ಆಟ ಆಡಿಸಿ ನಮ್ಮಪ್ಪನನ್ನೇ ಅಪರಾಧಿ ಎಂದು ಬಿಂಬಿಸಿ ಶಿಕ್ಷೆ ಕೊಡಿಸಿ ಕೈ ತೊಳೆದುಕೊಳ್ಳುತ್ತಿದ್ದರು. ಪ್ರದ್ಯುಮ್ನನು ಮಾತ್ರ ಈ ವಿಚಾರದಲ್ಲಿ ಯಾರಿಗೂ ಹೆದರದೆ ಧೈರ್ಯವಾಗಿ ನಿಂತು  ತುಂಬಾ ಸಹಾಯವನ್ನು ಮಾಡುತ್ತಿದ್ದಾನೆ.  ಅವನ ಸಂಜನಳ  ಎಂಗೇಜ್‌ಮೆಂಟ್ ನಿಲ್ಲಿಸುವಂತೆ ಹೆದರಿಸಿ ನಿಂದಿಸಿದರೂ ಕೂಡಾ ಅದನ್ನು ಮನಸಲ್ಲಿ ಇಟ್ಟುಕೊಳ್ಳದೆ ನನ್ನ ಸಹಾಯಕ್ಕೆ ಬಂದಿದ್ದಾನೆಂದು ತಾನೇ ವಿಷಾಧಿಸಿಕೊಳ್ಳುತ್ತಾ,  ಗಡಿಯಾರ ನೋಡಿದಾಗ ರಾತ್ರಿ ಒಂಬತ್ತು ಗಂಟೆಯಾಗಿದ್ದು, ಇಂದಾದರೂ ಬೇಗ ಮಲಗೋಣವೆಂದುಕೊಂಡು ಬೇಗನೇ ಊಟ ಮಾಡಿ ರೂಮಿಗೆ ಬಂದು ಮೊಬೈಲನ್ನು ಜೇಬಿನಿಂದ ತೆಗೆದು ಟೇಬಲ್ ಮೇಲೆ ಇಡುತ್ತಾ, ಸಂಜನಳನ್ನು ಪುನಃ ಜ್ಞಾಪಿಸಿಕೊಂಡು  ಈ ವಿಷಯವನ್ನು ಸಂಜನಾಳಿಗೆ ಹೇಳಿ ಅವಳಿಗೆ ನಮ್ಮಪ್ಪನ ಮೇಲಿನ ಸಂಶಯವನ್ನು ದೂರಮಾಡಬೇಕೆಂದು ತಕ್ಷಣ ಸಂಜನಳಿಗೆ ಫೋನ್ ಮಾಡಿದಾಗ, ದಿಸ್ ನಂಬರ್ ಈಸ್ ನಾಟ್ ಪರ್ಮಿಟೆಡ್ ಟು ಕಾಲ್ ಎಂಬ ವಾಯ್ಸ್ ಮೆಸೇಜ್ ಕೇಳಿದ ಭಾಸ್ಕರನು ಓ ಸಂಜನಾ ನನ್ನ ನಂಬರ್ ಬ್ಲಾಕ್ ಮಾಡಿದ್ದಾಳೆಂಬುದೇ ಮರೆತುಹೋಗಿದೆ ಛೇ ಎಂದುಕೊಂಡು, ತನ್ನ ಅಮ್ಮನ ಬಳಿ ಬಂದು ಅಮ್ಮ ನಿನ್ನ ಮೊಬೈಲ್ ಕೊಡಮ್ಮಾ ಅರ್ಜಂಟಾಗಿ ಯಾರಿಗೋ ಫೋನ್ ಮಾಡಿಕೊಡುತ್ತೇನೆ.  ನನ್ನ ಮೊಬೈಲ್ ರೀಚಾರ್ಜ್ ಆಗಿಲ್ಲ ಎಂದು ಹೇಳಿ ಅಮ್ಮನಿಂದ ಮೊಬೈಲ್ ಪಡೆದುಕೊಂಡು ತನ್ನ ರೂಮಿಗೆ ಬಂದು, ಅದರಿಂದ ಸಂಜನಳ ನಂಬರ್ ಗೆ ಫೋನ್ ಮಾಡಿದಾಗ
ಸಂಜನ ಫೋನ್ ರಿಸೀವ್ ಮಾಡುವುದೇ ಇಲ್ಲ.‌ ಪುನಃ ಐದು ನಿಮಿಷ ಬಿಟ್ಟು ಫೋನ್ ಮಾಡಿದರೂ ಸಹಾ ಆಗಲೂ ರಿಸೀವ್ ಮಾಡುವುದೇ ಇಲ್ಲ. ಕೆಲವು ಬಾರಿ ಫೋನ್ ಮಾಡಿದ ನಂತರ  ಯೋರೋ ಇಷ್ಟೊಂದು ಸಲ ಫೋನ್ ಮಾಡುತ್ತಿದ್ದಾರೆ ಯಾರಿರಬಹುದೆಂದು ನೋಡಿದಾಗ ಹೊಸ‌ ನಂಬರ್ ಇದ್ದುದ್ದರಿಂದ ಏನು ಅರ್ಜಂಟು ಕೆಲಸವಿದೆಯೋ ಅದಕ್ಕೆ ನನಗೆ ಹಲವಾರು ಸಲ ಫೋನ್ ಮಾಡುತ್ತಿದ್ದಾರೆಂದುಕೊಂಡು, ಫೋನ್ ರಿಸೀವ್ ಮಾಡಿ ಹಲೋ‌ ಎಂದ ತಕ್ಷಣ
ಭಾಸ್ಕರನಿಗೆ ಖುಷಿಯಾಗಿ ಸ್ವಲ್ಪ ಗಂಟಲು ಸರಿಪಡಿಸಿಕೊಂಡು ಹಲೋ ಎಂದಾಗ ಸಂಜನಳಿಗೆ ಭಾಸ್ಕರನ ಧ್ವನಿ ಎಂದು ತಿಳಿಯದೆ ಹಲೋ‌ ಯಾರು ನೀವು ಈ ವೇಳೆಯಲ್ಲಿ ಒಂದು ಹುಡುಗೀಗೆ ಫೋನ್ ಮಾಡುತ್ತಿದ್ದೀರೀ? ನಾನು ಯಾರೆಂದು ಗೊತ್ತಾ ನಿಮಗೆ ಎಂದು ತೀಕ್ಷ್ಣವಾದ ಭಾಷೆಯಲ್ಲಿ ಕೇಳಿದಾಗ
ಹಲೋ,,, ಹಲೋ,,,, ಸಂಜನಾ,,, ನಾನು ಭಾಸ್ಕರ ಮಾತನಾಡುತ್ತಿರುವುದೆಂದು ಹೇಳಿದ್ದಕ್ಕೆ ಸಂಜನ ಅಸಹನೆಯಿಂದ ಓ ಹೋ ನೀನಾ? ನಿನ್ನ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದೇನೆಂದು ತಿಳಿದು, ಕಳ್ಳತನದಿಂದ ನನ್ನನ್ನು ಮಾತನಾಡಿಸಲು ಬೇರೆ ನಂಬರಿನಿಂದ ಮಾತನಾಡುತ್ತಿದ್ದೀಯಾ? ನಾಳೆಯಿಂದ ಈ ನಂಬರ್ ಸಿಮ್ ಬಿಸಾಕಿ ಬೇರೆ ನಂಬರ್ ಸಿಮ್ ಹಾಕಿಸಿಕೊಳ್ಳುತ್ತೇನೆ. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಕೆ ಹಾಕಿ ನನ್ನ ಪ್ರದ್ಯುಮ್ನನ ಎಂಗೇಜ್‌ಮೆಂಟ್ ನಿಲ್ಲಿಸಿ, ಈಗ ಪುನಃ ಫೋನ್ ಮಾಡುತ್ತಿದ್ದೀಯಲ್ಲಾ ? ನಿನ್ನ ಮನಸ್ಸಿನಲ್ಲೇನಿದೆ? ನನಗೆ ಇನ್ಯಾವ ರೀತಿ ತೊಂದರೆ ಕೊಡಬೇಕೆಂದುಕೊಂಡಿದ್ದೀಯಾ? ಎಂಗೇಜ್‌ಮೆಂಟ್ ನಿಂತ‌ ದಿನವೇ ನಿನ್ನ ಮೇಲೆ ಕಂಪ್ಲೇಂಟ್  ಕೊಡೋಣವೆಂದು ನಮ್ಮಪ್ಪ ಹೇಳಿದರು. ಹೋಗಲೀ ಪಾಪ ಎಂದು ನಾನೇ ತಡೆದೆ. ಪುನಃ ಇದೇರೀತಿ ನನಗೆ ಫೋನ್ ಮಾಡುತ್ತಿದ್ದರೆ  ನಿಮ್ಮಪ್ಪ ಇರುವ ಕಡೆ ನಿನ್ನನ್ನು ಕಳಿಸುತ್ತೇನೆ ಹುಷಾರ್  ಈಗ ಫೋನ್ ಆಫ್ ಮಾಡೆಂದು ಹೇಳಲು
ಪ್ಲೀಸ್ ಸಂಜನಾ ಹಾಗೆಲ್ಲಾ ಮಾಡಬೇಡಾ ನಿನಗೊಂದು ವಿಷಯ ಹೇಳಬೇಕೆಂದು ನನ್ನಮ್ಮನ ಮೊಬೈಲಿನಿಂದ ಫೋನ್ ಮಾಡುತ್ತಿದ್ದೇನೆ ಅಷ್ಚೇ ಎಂದು ಭಾಸ್ಕರ ಹೇಳಿದ ಮಾತಿಗೆ ಏನು ವಿಷಯ ಬೇಗ ಹೇಳಿ ಫೋನ್ ಆಫ್ ಮಾಡು ನಾನು ಯಾರಿಗೋ ಅರ್ಜಂಟಾಗಿ ಫೋನ್ ಮಾಡಬೇಕೆಂದು ಸಂಜನ  ನಿಷ್ಠೂರವಾಗಿ ಹೇಳಲು ಭಾಸ್ಕರನು ಸ್ವಲ್ಪ ಸಾವರಿಸಿಕೊಂಡು, ಎಸ್ ಐರವರು ನಮ್ಮಪ್ಪನನ್ನು ಬಿಟ್ಟು ನಾಲ್ಕನೇ ಆರೋಪಿಯನ್ನು ಹಿಡಿಯುತ್ತೇನೆಂದು ಹೇಳಿದ್ದಾರೆ. ಈಗ ನಮ್ಮಪ್ಪ ಜಾಮೀನಿನ ಮೇಲೆ ಹೊರಗಿದ್ದಾರೆ. ನಾಲ್ಕನೇ ಆರೋಪಿ ಸಿಕ್ಕ ತಕ್ಷಣ ನಮ್ಮಪ್ಪ ಕೊಲೆ ಆಪಾದನೆಯಿಂದ ಮುಕ್ತರಾಗುತ್ತಾರೆಂದು ಭಾಸ್ಕರ ಹೇಳಿದ್ದಕ್ಕೆ
ಸಂಜನಾ ತಿರಸ್ಕಾರದಿಂದ ಓ ಅಷ್ಚೇನಾ ವಿಷಯ? ನಾಲ್ಕನೇ ಆರೋಪಿ ನಿಮ್ಮಪ್ಪನೇ ಆದರೇನು? ಬೇರೆಯವರಾದರೆ ನನಗೇನಾಗಬೇಕು? ಮೊದಲು ಫೋನ್ ಆಪ್ ಮಾಡೆಂದು ಸಂಜನಾ ಹೇಳಲು ಇದರಿಂದ ನಿನಗೇನೂ ಆಗಬೇಕಿಲ್ಲವೆಂದು ನನಗೂ ಗೊತ್ತು ಆದರೆ ನಮ್ಮಪ್ಪನೇ ನಾಲ್ಕನೇ ಕೊಲೆ ಆರೋಪಿಯೆಂದು ವಿನಾಕಾರಣ ನಿಮ್ಮಪ್ಪ ನಮ್ಮ ಮದುವೆಯನ್ನು ಕ್ಯಾನ್ಸಲ್ ಮಾಡಿಸಿದರಲ್ಲಾ ,ಅದಕ್ಕೆ ನಮ್ಮಪ್ಪ ಕೊಲೆ ಆರೋಪಿಯಲ್ಲಾ ಎಂದು ತಿಳಿದುಕೊಳ್ಳಲೆಂದು ಫೋನ್ ಮಾಡಿದೆ ಎಂದು ಭಾಸ್ಕರ ಹೇಳಿದ ಮಾತಿಗೆ ಓ ಇನ್ನೂ ಎಸ್ ಐ ನಾಲ್ಕನೇ ಆರೋಪಿಯನ್ನು ಹುಡುಕಿ ಕರೆತಂದ ಮೇಲಷ್ಟೇ ನಿಮ್ಮಪ್ಪ ನಿರಪರಾಧಿ ಎಂದು ಸಾಬೀತಾಗುವುದು ಅಲ್ಲವೇ? ನಿಮ್ಮಪ್ಪನೇ ನಾಲ್ಕನೇ ಆರೋಪಿ ಇರುವಾಗ ಬೇರೆ ಆರೋಪಿಯನ್ನು ಎಲ್ಲಿಂದ ಹಿಡಿದುಕೊಂಡು ಬರುತ್ತಾರೆ? ನನ್ನನ್ನೇ ಪುನಃ  ಫೂಲ್ ಮಾಡುತ್ತಿದ್ದೀಯಾ? ಎಂದು ಸಂಜನ ಭಾಸ್ಕರನನ್ನು ಛೇಡಿಸಿದಾಗ ನೋ ನೋ ಸಂಜನಾ ನಿನ್ನನ್ನು ಫೂಲ್ ಮಾಡಿ ನನಗೇನೂ ಆಗಬೇಕಾಗಿಲ್ಲ. ಇದಕ್ಕೆ ಬೆಂಬಲವಾಗಿ ಪ್ರದ್ಯುಮ್ನ ನಿಂತಿದ್ದಾನೆ. ಅವನಿಂದಲೇ ಎಸ್ ಐ ರವರಿಗೆ ನಂಬಿಕೆ ಬಂದು ನಾಲ್ಕನೇ ಆರೋಪಿಯನ್ನು ಹಿಡಿದು ನನ್ನಪ್ಪನನ್ನು ಬಿಡುಗಡೆ ಮಾಡಿಸುವುದಾಗಿ ಹೇಳಿದ್ದಾರೆ ಎಂದಾಗ ನೀನು ಎಂಗೇಜ್‌ಮೆಂಟ್ ಚೌಲ್ಟ್ರಿಗೆ ಬಂದು ವಿಷ ಕುಡಿಯುತ್ತೇನೆಂದು ಹೆದರಿಸಿದಾಗ ಧೈರ್ಯ ತೋರಿ ನನ್ನ ಜೊತೆ ಎಂಗೇಜ್‌ಮೆಂಟ್ ಮಾಡಿಕೊಳ್ಳದೆ ಬೇರೆ ಮದುವೆ ಮಾಡಿಕೊಂಡ  ಹೇಡಿಗೆ ಅಷ್ಟೊಂದು ಧೈರ್ಯ ಎಲ್ಲಿಂದ ಬಂತು ನನಗೇ ಆಶ್ಚರ್ಯವಾಗುತ್ತಿದೆಯೆಂದು ವ್ಯಂಗ್ಯದ ಮಾತಿನಿಂದ ಭಾಸ್ಕರನಿಗೆ ತಿವಿದಾಗ ಅದು ಹಾಗಲ್ಲಾ ಸಂಜನಾ ನಾವಿಬ್ಬರೂ ಪ್ರೀತಿಸುತ್ತಿದ್ದೇವಲ್ಲಾ ನಮ್ಮ ಮದ್ಯೆ ನಾನೇಕೆ ಬರಬೇಕೆಂದು ಹಾಗೆ ಮಾಡಿದನಂತೆ ಎಂದ ತಕ್ಷಣ ನಮ್ಮಿಬ್ಬರ ಮದುವೆ ಮುರಿದುಬಿದ್ದು ಅವಮೊಂದಿಗೆ ಎಂಗೇಜ್‌ಮೆಂಟ್ ಫಿಕ್ಸ್ ಆದಾಗಲೇ ನಮ್ಮಿಬ್ಬರ ಪ್ರೀತಿಗೆ ಕೊಳ್ಳಿ ಇಟ್ಟಾಯಿತೆಂದು ಅವನಿಗೆ ಅರ್ಥವಾಗಿರಲಿಲ್ಲವಂತ ಎಂದು ಸಂಜನ ಕೋಪದಿಂದ ಪ್ರಶ್ನಿಸಿದಾಗ
ಪ್ಲೀಸ್ ಸಂಜನಾ ಪ್ರೀತಿಗೆ ಕೊಳ್ಳಿ ಇಟ್ಚಾಯ್ತೆಂದು ಮಾತ್ರ ಹೇಳಬೇಡಾ ಎಂದು ಭಾಸ್ಕರ ಹೇಳಲು ಓ ಹಾಗಾದರೆ ನಾನಿನ್ನೂ ಆ,,ಹಾ,,,ಹಾ,,,ಹಾ,,,ನಿನ್ನನ್ನೇ ಪ್ರೀತಿಸುತ್ತಿದ್ದೇನೆಂದು ತಿಳಿದಿದ್ದೀಯಾ? ಪುನಃ ನನ್ನ ಮುಂದೆ ಪ್ರೀತಿಯ ವಿಷಯ ಮಾತನಾಡಬೇಡಾ ಈಗ ಫೋನ್ ಆಫ್ ಮಾಡು ಎಂದು ಏರುಧ್ವನಿಯಲ್ಲಿ ಸಂಜನ ಹೇಳುತ್ತಾಳೆ.

ಮುಂದುವರೆಯುತ್ತದೆ...

ಮಂಗಲಧರೆ
ಸಾಹಿತಿ
ನೆಲಮಂಗಲ

ಕಾಮೆಂಟ್‌ಗಳು