- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಹಾವೇರಿ: ನಾ ಎಂಥ ಖಬರಗೇಡಿ ಅದೇನಿ, ಇರೋದೊಂದು ಅಪ್ಪನ ಫೋಟೋ ಕಳ್ಕೊಂಡೆ. ಇನ್ನೆಲ್ಲಿ ಹುಡುಕಲಿ? ಅಪ್ಪನೂ ಇಲ್ಲ... ಅಪ್ಪನೂ ನೆನಪೂ ಇಲ್ಲ... ಎಂದು ಪರಿತಪಿಸುವ ಶಂಕರಣ್ಣ ಎಂಬ ಕಥಾನಾಯಕನ ಸುತ್ತಲೂ ಹೆಣೆದ ನಾಟಕವೇ ಅಪ್ಪನ ಫೋಟೋ
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆವರಣದಲ್ಲಿ ಲಲಿತಕಲಾ ಅಕಾಡೆಮಿ ಏರ್ಪಡಿಸಿರುವ ನಾಲ್ಕು ದಿನಗಳ ಭಾವಚಿತ್ರ ತರಬೇತಿ ಕಾರ್ಯಾಗಾರದ ಎರಡನೇ ದಿನ ಸಾಹಿತಿ ಸತೀಶ ಕುಲಕರ್ಣಿ ಅವರು ರಚಿಸಿ, ನಿರ್ದೇಶಿಸಿದ ಅಪ್ಪನ ಫೋಟೋ ಎಂಬ ಅರ್ಧ ಗಂಟೆಯ ಕಿರು ನಾಟಕ ಶಿಬಿರಾರ್ಥಿಗಳ ಮನಸ್ಸನ್ನು ಗೆದ್ದಿತು.
ಮನೆತನದ ಹಿರಿಯರ, ಸಾಧು-ಸಂತರ, ಸಾಧಕರ ಭಾವಚಿತ್ರಗಳನ್ನು ಸರ್ವೇ ಸಾಮಾನ್ಯವಾಗಿ ಪ್ರತಿ ಮನೆಯಲ್ಲಿ ಅಳವಡಿಸಿರುತ್ತಾರೆ. ಅದೊಂದು ಅಪರೂಪದ ಸ್ಮೃತಿ ಅಥವಾ ನೆನಪೆಂದೇ ಇಡೀ ಮನೆ ಭಾವಿಸುತ್ತದೆ. ಇಂಥ ಭಾವಚಿತ್ರಗಳ ರಚನೆ ಕಡಿಮೆಯಾಗುತ್ತಿದೆ. ಇದಕ್ಕೆ ಪೂರಕವಾಗಿ ಹೊಸ ಪೀಳಿಗೆಯಲ್ಲಿ ತರಬೇತಿ ನೀಡುವ ಕಾರ್ಯಾಗಾರವಿದು.
ಇಂಥ ಸನ್ನಿವೇಶಗಳನ್ನು ಹಾವೇರಿ ನಗರದ ಸಾಹಿತಿ ಕಲಾವಿದರ ಬಳಗ ಶಿಬಿರಕ್ಕೆ ಪೂರಕ ಎಂಬಂತೆ ಅಪ್ಪನ ಫೋಟೋ ಕಿರು ನಾಟಕವನ್ನು ಪ್ರದರ್ಶಿಸಿತು. ಸಿನಿಮಾ ವೀಕ್ಷಣೆಗೆ ಹೋದ ಶಂಕ್ರಣ್ಣನ ಜೇಬಿನೊಳಗಿದ್ದ ಪಾಕೀಟು ಕಳುವಾಗಿ ಅದರಲ್ಲಿಯ ಅಪ್ಪನ ಫೋಟೋ ಕೂಡ ಮಾಯವಾಗಿರುತ್ತದೆ. ಹತ್ತಾರು ವರುಷಗಳಿಂದ ಕಾಪಿಟ್ಟುಕೊಂಡಿದ್ದ ಅಪ್ಪನ ಏಕೈಕ ಫೋಟೋ ಕಳೆದುದ್ದಕ್ಕೆ ಕಳವಳಗೊಂಡ ಕಥಾ ನಾಯಕ ಪೊಲೀಸ್ ಠಾಣೆ ಮೆಟ್ಟಿಲೇರುತ್ತಾನೆ. ಆಕಸ್ಮಿಕವಾಗಿ ಕಳ್ಳನೂ ಸಿಗುತ್ತಾನೆ. ಇದು ಕಥಾ ವಸ್ತು.
ಆದರೆ ಈ ಫೋಟೋ ದೊಡ್ಡದಾಗಿ ಮಾಡಿಸುವ ದಾರಿ ಗೊತ್ತಿರದ ಕಥಾ ನಾಯಕ ಕೊನೆಗೆ ಭಾವಚಿತ್ರ ತರಬೇತಿ ಶಿಬಿರಕ್ಕೆ ಬಂದು ಅದಕ್ಕೊಂದು ಪರಿಹಾರ ಕಂಡು ಕೊಳ್ಳುತ್ತಾನೆ. ತುಸು ಹಾಸ್ಯ ಮಿಶ್ರಿತ, ಒಮ್ಮೊಮ್ಮೆ ವಿಷಾದದಲ್ಲಿಯೂ ಸಾಗುವ ನಾಟಕ ಭಾವಚಿತ್ರದ ಅವಶ್ಯಕತೆಯ ಸಂದೇಶವನ್ನು ನೀಡಿತು.
ಕಿರು ನಾಟಕದ ಮುಖ್ಯ ಪಾತ್ರವಾಗಿ ಶಂಕರ ತುಮ್ಮಣ್ಣನವರ, ಮುತ್ತುರಾಜ್ ಹಿರೇಮಠ, ಪ್ರಕಾಶಗೌಡ ಪಾಟೀಲ, ಕಾಂತೇಶ ಅಂಗಡಿ, ಪೃಥ್ವಿರಾಜ ಬೆಟಗೇರಿ, ಹನುಮಂತಸಿಂಗ್ ರಜಪೂತ, ಡಾ.ಅಂಬಿಕಾ ಹಂಚಾಟೆ ತಮ್ಮ ಪಾತ್ರಗಳಿಗೆ ಜೀವ ತುಂಬಿದರು.
ಇದಕ್ಕೂ ಮುನ್ನ ಡಾ.ಜಗನ್ನಾಥ ಗೇನಣ್ಣವರ ಬೆಟಗೇರಿ ಕೃಷ್ಣಶರ್ಮರ ಹಾಡಿನೊಂದಿಗೆ ನಾಟಕ ಶುರುವಾಯಿತು.
ಭಾವಚಿತ್ರವೆಂದರೆ ಒಂದು ಮನೆತನದ ಜೀವನ ಚಿತ್ರವಿದ್ದಂತೆ. ಹಿರಿಯರ ನಡೆ ನುಡಿ ಸ್ಮೃತಿ ಅಡಗಿರುವ ಭಾವಚಿತ್ರಗಳ ಅಗತ್ಯ ಅರಿತು ಲಲಿತಕಲಾ ಅಕಾಡೆಮಿ ತರಬೇತಿ ಕಾರ್ಯಾಗಾರ ಏರ್ಪಡಿಸಿದೆ ಎಂಬ ಶಿಬಿರದ ಸಂಚಾಲಕ ಕರಿಯಪ್ಪ ಹಂಚಿನಮನಿ ಅವರ ಮಾತುಗಳನ್ನು ಅಕ್ಷರಶಃ ನಾಟಕ ಪ್ರತಿನಿಧಿಸಿತು.
ಹಿರಿಯ ಕಲಾವಿದರಾದ ದಯಾನಂದ ಕಾಮಕರ, ಕುಮಾರ ಕಾಟೇನಹಳ್ಳಿ, ಸಾಹಿತಿ ಕಲಾವಿದರ ಬಳಗದ ಎಸ್.ಆರ್.ಹಿರೇಮಠ, ಗೂಳಪ್ಪ ಅರಳಿಕಟ್ಟಿ, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ