ಕಾದಂಬರಿ- ಸಂಚಿಕೆ -35

ಮಕ್ಕಳ ದಿನಾಚರಣೆ ವಿಶೇಷ

ಕಿರೇಸೂರ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಶ್ರಮದಾನದ ಮೂಲಕ ಅರಳೀಕಟ್ಟೆ ನಿರ್ಮಿಸಿದ ಮಕ್ಕಳು

ಶಾಲಾ ಆವರಣದ ಮಧ್ಯದಲ್ಲಿ ಒಂದು ಸುಂದರವಾದ ಅರಳೀಮರ. ಸುಮಾರು ೫೦ ವರ್ಷ ಹಳೆಯದ್ದಿರಬಹುದು. ಅದರ ನೆರಳು ಎಲ್ಲರಿಗೂ ಪ್ರಿಯವಾದದ್ದು. ಈ ದಿನ ಮಕ್ಕಳು ಚೌಕಾಕಾರದಲ್ಲಿ ಮರದ ಸುತ್ತಲೂ ದೊಡ್ಡ ಕಲ್ಲುಗಳನ್ನು ಜೋಡಿಸಿದರು. ಗುದ್ದಲಿ ಸಲಕಿ ಹಿಡಿದು ಮಣ್ಣು ಹೊತ್ತು ತಂದರು. ಮಣ್ಣಿಗೆ ನೀರು ಹಾಕಿದರು. ಅರಳೀಮರದ ಸುತ್ತಲೂ ೧೫ ಅಡಿ ಉದ್ದ, ೧೫ ಅಡಿ ಅಗಲ, ಎರಡು ಅಡಿ ಎತ್ತರದ ಕಟ್ಟೆ ನಿರ್ಮಿಸಿದರು. ಬಾಲಕಿಯರು ಸಗಣಿಯಿಂದ ಕಟ್ಟೆಯನ್ನು ಸಾರಿಸಿ ಸುಂದರಗೊಳಿಸಿದರು. ಮಕ್ಕಳ ದಿನಾಚರಣೆಯ ಪೂರ್ವಭಾವಿ ಶ್ರಮದಾನದ ಮೂಲಕ ಹುಬ್ಬಳ್ಳಿ ತಾಲೂಕಿನ ಕಿರೇಸೂರ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ನಡೆದ ಮಕ್ಕಳ ಈ ವಿಶೇಷ ಕಾರ್ಯ ಸಾರ್ವಜನಿಕರ ಗಮನ ಸೆಳೆಯಿತು.

ಡಿ.ಎಸ್.ಇ.ಆರ್.ಟಿ ಸಹಯೋಗದಲ್ಲಿ ಇಂಡಿಯಾ ಫೌಂಡೇಶನ್ ಫಾರ್ ಆರ್ಟ್ಸ, ಕಲಿ-ಕಲಿಸು ಕಲಾ ಅಂತರ್ಗತ ಯೋಜನೆ ಭಾಗವಾಗಿ ಶ್ರಮದಾನದ ಮೂಲಕ ಅರಳೀಕಟ್ಟೆ ನಿರ್ಮಾಣ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲಾ ಯೋಜನೆಯ ನಿರ್ವಾಹಕರಾದ ಡಾ. ಲಿಂಗರಾಜ ರಾಮಾಪೂರ ಅವರ ಮಾರ್ಗದರ್ಶನದಲ್ಲಿ ‘ಅರಳೀಕಟ್ಟೆ ತೆರೆದ ವಾಚನಾಲಯ’ ಎಂಬ ಯೋಜನೆಯ ಅಂಗವಾಗಿ ಶ್ರಮದಾನದ ಮೂಲಕ ೮ ಹಾಗೂ ೯ನೇ ತರಗತಿಯ ಮಕ್ಕಳು ಹಾಗೂ ಶಿಕ್ಷಕರು ಕಟ್ಟೆ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು. ಅರಳೀಕಟ್ಟೆಯ ಮೇಲೆ ವಾಚನಾಲಯ ಚಟುವಟಿಕೆ, ಮರದ ಅಧ್ಯಯನ, ಮರಗಳ ಅಟೋಗ್ರಾಫ್, ಹರ್ಬೇರಿಯಂ ರಚನೆ, ಜೀವ ವೈವಿಧ್ಯ ದಾಖಲಾತಿ, ಮರದ ಕುರಿತಾದ ಕಥೆ ಕಾವ್ಯ ರಚನೆ ಮುಂತಾದ ಕಲಾತ್ಮಕ ಚಟುವಟಿಕೆಗಳನ್ನು ಮುಂದಿನ ದಿನಗಳಲ್ಲಿ ಯೋಜಿಸಲಾಗಿದೆ. ಶಾಲಾ ಮುಖ್ಯೋಪಾಧ್ಯಾಯರಾದ ಸುಮನ ತೇಲಂಗ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 

ಕಾಮೆಂಟ್‌ಗಳು