ಆನ್
ದತ್ತಿ
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಹುಟ್ಟು ಆಕಸ್ಮಿಕವಾದರೂ, ಸಾವು ನಿಶ್ಚಿತ..... ಈ ನಡುವೆ ಮಾನವನ ಬದುಕು ತೀರ ಸರಳವಾಗಿ ಸಾರ್ಥಕವಾಗಬೇಕಿತ್ತು.... ಆದರೆ.....?
ನಾಗರಿಕತೆಯ ಹೆಸರಿನಲ್ಲಿ ಕೆಲವು ಸಮಯಸಾಧಕರು ಸೃಷ್ಟಿಮಾಡಿದ ಕಗ್ಗಂಟುಗಳನ್ನೆಲ್ಲ ಇಂದಿಗೂ ತುಳಿಯುತ್ತಲೇ ಬದುಕಿನ ಸಾರ್ಥಕತೆಯ ಸುಧೀರ್ಘ ಹಾದಿ ಸವೆಸಲು ಬಯಸುವ ಮನುಷ್ಯನಿಗೆ ಸದಾಕಾಲ ಒಂದಿಲ್ಲೊಂದು ತೊಡಕು ಎದುರಾಗುತ್ತಲೇ ಇರುತ್ತದೆ ಅವನ ಅಸಹಾಯಕತೆ ಹಣವಂತರ ಪಾಲಿಗೆ ಕಾಲೊರೆಸುವ ಚಾಪೆಯಾದರೆ.... ಪುರೋಹಿತಷಾಹಿಯ ಪಾಲಿಗೆ ಮೌಡ್ಯ, ಅಂಧಾನುಕರಣೆಗಳ ದೌರ್ಜನ್ಯದ ಶಂಖ ಊದಲಿಕ್ಕೆ ಆಸ್ಪದವಾಗಿ ಬಿಟ್ಟಿರುತ್ತದೆ. ಇದೆಲ್ಲದರ ಮಧ್ಯೆ ಮನುಷ್ಯನನ್ನು ಕಾಡುವ ನೀರು-ಉದ್ಯೋಗ ಅನ್ನ...... ಇನ್ನೂ ಮುಂತಾದ ಪ್ರಮುಖ ಸಮಸ್ಯೆಗಳ ನಿವಾರಣೆಯ ಕುರಿತು ಜವಾಬ್ದಾರಿಯುತ ನಾಯಕಮಣಿಗಳು ವೇದಿಕೆಗಳಲ್ಲಿ ಭರ್ಜರಿಯಾಗಿ ಮಾತನಾಡಿ `ದೂರ ಸರಿದು ಬಿಟ್ಟಿರುತ್ತಾರೆ.... ಜಾತಿ, ಬಣ್ಣ, ಭಾಷೆ, ವರ್ಗ, ಲಿಂಗಬೇಧಗಳ ಕಿರಿಕಿರಿಗಳು ಇವುಗಳಿಂದಾಗಿ ಹುಟ್ಟಿಕೊಂಡು ರಕ್ತಕಾರಂಜಿಗಳನ್ನು ನಿರ್ಮಿಸಿ ಮುಗ್ಧ ಜೀವಗಳು ಚಂಡಿನAತೆ ಎಲ್ಲೋ ನಿಸ್ತೇಜವಾಗಿ ಉರುಳಿ ಬಿದ್ದಿರುತ್ತವೆ.....
ಪರಸ್ಪರ ವೈಷಮ್ಯ, ಅಶಿಸ್ತುಗಳು..... ಆರಾಜಕತೆಯು ಕವಲುದಾರಿಯನ್ನು ಬದುಕಿನ ಹೆದ್ದಾರಿಯಲ್ಲಿ ಸೃಷ್ಟಿಸಿಬಿಡುತ್ತವೆ. ಮೌಡ್ಯ, ಡಾಂಭಿಕತೆ, ಅಂಧಾನುಕರಣೆಗಳ ಮೂಲಕ ಅವಿವೇಕವನ್ನು ಮನುಷ್ಯನ ನರನಾಡಿಗಳಲ್ಲಿ ತುಂಬಿಬಿಡುವ ಪುರೋಹಿತಷಾಹಿ, ಸೂಟು ಬೂಟು, ಕಾವಿ ಖಾದಿ ಧಾರಿಗಳು ತಮ್ಮೆಲ್ಲ ಸೋಗಲಾಡಿತನವನ್ನು ಪ್ರದರ್ಶಿಸುತ್ತಲೇ ಪ್ರಖಾಂಡ ಪಂಡಿತರೋ.... ಧೀಮಂತ ನಾಯಕರೋ ----- ಜಗದ್ಗುರುಗಳೋ..... ಹೀಗೆ ಏನೇನೋ ಆಗಿಬಿಡುತ್ತಾರೆ. ಅತ್ತ ಸಾಮಾನ್ಯ ಮನುಷ್ಯ ತನ್ನೆಲ್ಲ ಹುಂಬತನಗಳಿಂದಾಗಿ ಈ ಜನರು ಹಚ್ಚಿದ ಹುನ್ನಾರುಗಳ ಕಿಚ್ಚಿನಲ್ಲಿ ಜೀವಂತ ಸುಟ್ಟು ಕರಕಲಾಗುತೊಡಗುತ್ತಾನೆ.
ಇದೇ ರೀತಿ ಈ ಭೂಮಿಯ ಮೇಲೆ ಹುಟ್ಟಿದ ನಾನು ಬದುಕಿನುದ್ದಕ್ಕೂ ಅನುಭವಿಸಿದ ನೋವುಗಳನ್ನು ಹೊರಹಾಕಲು ಯತ್ನಿಸಿ.... ಬದುಕಿನ ಅನುಭವಗಳು ನನ್ನನ್ನು ಅನುಭಾವದೆಡೆಗೆ ಒಯ್ದಿದ್ದನ್ನು ಈ "ಅನುಭವಗಳಿಂದ ಅನುಭಾವದೆಡೆಗೆ" ಪುಸ್ತಕದಲ್ಲಿ ದಾಖಲಿಸಿದ್ದೇನೆ. ಇಲ್ಲಿ ಯಾವ ನಕಲೂ ಮಾಡಿಕೊಂಡು ನನ್ನನ್ನು ನಾನು ಹೊಗಳಿಕೊಂಡು ಕೃತಾರ್ಥನಾಗುವ ಆತ್ಮರತಿಯೂ ಇಲ್ಲ. ಇದು ನನ್ನ ಬದುಕಿನ ತೆರದ ಪುಸ್ತಕ. ಬಾಲ್ಯದ ಸಂಕಷ್ಟಗಳು, ಹರೆಯದಲ್ಲಿನ ಉದ್ವೇ ಗಗಳು, ನಂತರದ ಹೋರಾಟ....... ನನ್ನಲ್ಲಿ ಬೆಳೆದು ಬಂದ ವಿಚಾರ ಪ್ರಜ್ಞೆ ಕಾಲಕ್ರಮೇಣ ಬದುಕಿನ ಅನುಭಗಳನ್ನು ಸ್ವಾಧಿಸುತ್ತಾ ಸ್ಪಂದಿಸಿ ಸಾಗಿದಂತೆಲ್ಲ ೧೨ನೇ ಶತಮಾನದ ಶರಣರ ಅನುಭವದ ವಚನಗಳು ನನ್ನನ್ನು ಅನುಭಾವದೆಡೆಗೆ ಒಯ್ದದ್ದರ ಸಮಗ್ರ ದಾಖಲೆಗಳನ್ನು ಇದ್ದದ್ದು ಇದ್ದಹಾಗೆಯೇ ಎಂಬAತೆ ನನ್ನದೇಯಾದ ಆಡು ಭಾಷೆಯಲ್ಲಿ ಆತ್ಯಂತ ತುಮುಲದಿಂದ ಹೇಳಿಕೊಳ್ಳುವ ಪ್ರಾಮಾಣಿಕ ಪ್ರಯತ್ನದಿಂದಾಗಿ ಈ ಪುಸ್ತಕ ನಿಮ್ಮ ಕೈಗಳಲ್ಲಿ ಭದ್ರವಾಗಿ ನಿಂತು ನಿಮ್ಮ ಕಣ್ಗಳನ್ನು, ತನ್ಮೂಲಕ ನಿಮ್ಮ ಮನಸ್ಸನ್ನು ಸೆಳೆಯಲಿಕ್ಕೆ ಕಾರಣವಾಗುತ್ತಿದೆ.
ಹಾಗೆ ನೋಡಿದರೆ ನಾನು ವೃತ್ತಿವಂತ ಬರಹಗಾರನೂ ಅಲ್ಲ ...... ಯಾವುದೇ ಪ್ರಕಾರದ ಸಾಹಿತಿಯೂ ಅಲ್ಲ. ಯಾವುದೇ ವಿದ್ಯಾಲಯ (?) ಯಾಂತ್ರಿಕವಾಗಿ ಕೊಡುವ ಪದವಿಯನ್ನು ಧರಸಿದವನೂ ಅಲ್ಲ, ಓದಿದ್ದೂ ಕೇವಲ ೬ನೇ ತರಗತಿ ಆದರೆ ಬದುಕಿನ ಅನುಭವ ವಿಶ್ವವಿದ್ಯಾಲಯ ಕಲಿಸಿದ ಪಾಠಗಳನ್ನು ನಿಯತ್ತು, ನಿಷ್ಟೆಯಿಂದ ಅರಿತುಕೊಂಡು ಅವುಗಳನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಂಡಿದೆನೆ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ....
ಬದುಕಿನ ಹಾದಿಯಲ್ಲಿ ಸಾಗಿದಂತೆಲ್ಲ ಪಾಶ್ಚಿಮಾತ್ಯರ ಬದುಕಿನ ಸರಳ ಜೀವನಶೈಲಿಗೂ ಸ್ಪಂದಿಸಿದ ನಾನು, ೧೨ನೇ ಶತಮಾನದ ಶರಣರ ಸರಳಜೀವನದ ವಿಚಾರಗಳಿಗೂ ಅಷ್ಟೇ ಸ್ಪಂದಿಸಿ ಬದುಕನ್ನು ಪ್ರೀತಿಸಿ ಗೌರವಿಸಿ ಆದರೊಟ್ಟಿಗೆ ಬೆಳೆದಂತೆಲ್ಲ ಮನುಷ್ಯನ ಅಸಾಯಹಕತೆಯ ಕೊನೆಯ ಧ್ವನಿ ಬರಹ ಎಂಬುದನ್ನು ಅರಿತು ಕಹಿ-ಸಿಹಿಗಳನ್ನು ಮನುಷ್ಯ ಹೇಗೆ ಹಂಚಿಕೊಳ್ಳುತ್ತಾನೋ ಅದೇ ನನ್ನ ಕಹಿ-ಸಿಹಿಗಳನ್ನು ಅಗಿದು ಜಗಿದು ಅದರ ಸ್ವಾದ ಹೀರಿ ಆ ಮೂಲಕ ಬಂದ ಅನುಭವಗಳನ್ನು ಇಲ್ಲಿ ನಿಮ್ಮೊಡನೆ ಹಂಚಿಕೊಳ್ಳಲು ಯತ್ನಿಸಿದ್ದೇನೆ.
ಆಕಾಶ ಸದಾಕಾಲ ಹೇಗೆ ಬೆತ್ತಲಾಗಿರುತ್ತದೆಯೋ.... ಈ ಬೆತ್ತಲಿನ ನಡುವೆಯೇ ಎಷ್ಟು ಸುಂದರವಾಗಿರುತ್ತದೋ... ಬಯಲಲ್ಲಿ ಬೆಳಗುವ ನಕ್ಷತ್ರ.. ತಾರೆಗಳಂತೆ ಯಾವುದೇ ಪೂರ್ವಾಗ್ರಹಗಳಿಲ್ಲದೆ ಕಾರ್ಯನಿರ್ವಹಿಸುತ್ತವೋ ಹಾಗೆ ನಾನು ನನ್ನನ್ನು ನಿಮ್ಮೆದುರು ತೆರೆದುಕೊಂಡಿದ್ದೇನೆ. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಹೇಳಬೇಕೆಂದರೆ ಒಬ್ಬ ವೈದ್ಯನು ಸಾವಿನ ನಿಜಾಂಶವನ್ನು ಬಯಲಿಗೆಳೆಯಲು ನಿರ್ಜಿವ ದೇಹದ ಮೇಲೆ ಪೋಸ್ಟ್ ಮಾರ್ಟಂ ಮಾಡಿದಂತೆ ನಾನು ಕೂಡ ಈ ನಿರ್ಜಿವ ವ್ಯವಸ್ಥೆ ಹಾಗೂ ಪರಿಸರವನ್ನು ಅರಿತು ನುರಿತು, ಮುಕ್ತವಾಗಿ ಪರಿಶೀಲಿಸಿ, ಧರ್ಮ, ಜಾತಿ ಗೊಂದಲದ ಕಪಟ ನಾಟಕಧಾರಿಗಳನ್ನು ಬಯಲಿಗೆಳೆದು, ವೈಜ್ಞಾನಿಕವಾಗಿ ಎಲ್ಲರಲ್ಲಿ ಅಡಗಿರುವ ಜ್ಯೋತಿಯನ್ನು ಜಾಗೃತಗೊಳಿಸಲು ಈ ಲೇಖನದ ಮುಖಾಂತರ ಪ್ರಯತ್ನಿಸಿದ್ದೇನೆ.
ಈ ಪುಸ್ತಕವು ಪರಿಶುದ್ಧವಾಗಿ ಸಿದ್ದಗೊಂಡು ಜನಮನವನ್ನು ತಲುಪಲು ಇಂತಿಂಥವರೇ ಎನ್ನದೇ, ಅಗತ್ಯ ಸಹಕಾರ ನೀಡಿದ ಎಲ್ಲಾ ಸ್ನೇಹಿತರಿಗೂ, ಪುಟ ವಿನ್ಯಾಸ ಮಾಡಿದ ಧಾರವಾಡದ ಪ್ಯಾಟ್ಇನ್ ಮೀಡಿಯಾದ ನನ್ನ ಮಾನವಬಂಧುಗಳಿಗೂ, ಸೊಗಸಾಗಿ ಮುದ್ರಿಸಿಕೊಟ್ಟ ಮುದ್ರಣಾಲಯದವರಿಗೂ ನನ್ನ ನಮನಗಳು.
ಅನುಭವಗಳು ಎಂದೆಂದಿಗೂ ಕಾಲ್ಪನಿಕವಲ್ಲ....... ಅವೆಲ್ಲವೂ ಮನುಷ್ಯನ ಬದುಕಿನಲ್ಲಿ ಹಾಸುಹೊಕ್ಕಾಗಿರುತ್ತವೆಂಬುದು ಸರ್ವಕಾಲಿಕ ಸತ್ಯ. ಸದರಿ ಪುಸ್ತಕದುದ್ದಕ್ಕೂ ತುಂಬಿಕೊಂಡಿರುವ ಸತ್ಯ ಘಟನೆಗಳು, ಅದರಲ್ಲಿ ಬರುವ ವ್ಯಕ್ತಿಗಳ ಹೆಸರಿನ ಪ್ರಸ್ತಾವನೆ ಯಾವುದೇ ದುರುದ್ದೇಶಗಳಿಂದ ಕೂಡಿದ್ದಲ್ಲ...... ಜೊತೆಗೆ ವ್ಯಕ್ತಿಯ ತೇಜೋವಧೆ ಮಾಡುವ ಕುತಂತ್ರವೂ ಇಲ್ಲಿಲ್ಲ. ಘಟನೆಗಳನ್ನು ಹೇಳುತ್ತಾ ಹೋಗುವಾಗ ವ್ಯಕ್ತಿಯ ಹೆಸರು ಆತ್ಯಂತ ಆನಿವಾರ್ಯವಾಗಿರುವುದರಿಂದಲೇ ಹೆಸರುಗಳನ್ನು ಬಳಸಬೇಕಾಗಿದೆಯಷ್ಟೆ.
ನನ್ನ ಮಾನವಜ್ಯೋತಿ (ವಿಚಾರ ಸರಣಿ) "ಅರಿವಿನ ವನ" (ಕವನ ಸಂಕಲನಗಳನ್ನು) ಕೈಹಿಡದೆತ್ತಿ ಓದಿ ನಿಮ್ಮ ಮನಸ್ಸಿನಲ್ಲಿ ಛಾಪು ಮೂಡಿಸಿಕೊಂಡಂತೆ "ಅನುಭವಗಳಿಂದ ಅನುಭಾವದೆಡೆಗೆ"ಗೂ ಕೂಡ ನಿಮ್ಮ ಮನಸ್ಸು ತೆರೆದಹೃದಯದ ಸ್ವಾಗತ ನೀಡುತ್ತದೆಂದು ಆಶಿಸುತ್ತೇವೆ.
*ಸುವಿಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ